ಮಾರ್ಜಾಲ ಕಿಶೋರ ನ್ಯಾಯ -
ವೈಷ್ಣವಧರ್ಮದಲ್ಲಿ ಮರ್ಕಟ ಕಿಶೋರ ನ್ಯಾಯಕ್ಕೆ ಪ್ರತಿಯಾದ ವಾದವಿದು. ಸಾರಾಂಶವಿಷ್ಟು; ಭಗವಂತನ ಅನುಗ್ರಹ ನಿರ್ಹೇತುಕ. ಮನುಷ್ಯ ಮಾಡುವ ಅಲ್ಪ ಪ್ರಯತ್ನಕ್ಕೂ ಆತ ಪಡೆಯುವ ಹಿರಿದಾದ ಕೃಪೆಯ ಸಂಪತ್ತಿಗೂ ತಾಳ ಹಾಕಲು ಸಾಧ್ಯವಿಲ್ಲ. ಎಲ್ಲವೂ ಭಗವಂತನಿಗೇ ಸೇರಿದ್ದು. ಅವನ ಕೃಪೆಗೆ ಯಾವ ಉಪಾದಿಗಳೂ ಇರಲು ಸಾಧ್ಯವಿಲ್ಲ. ಇದು ಮಾರ್ಜಾಲ ಕಿಶೋರ ನ್ಯಾಯವೆನಿಸುತ್ತದೆ. ಎಂದರೆ ಚೇತನನು ಭಗವಂತನ ಕೃಪೆಗೆ ಏನನ್ನೂ ಮಾಡಬೇಕೆಂಬ ನಿಯಮವಿಲ್ಲ. ಹೇಗೆ ತಾಯಿ ಬೆಕ್ಕು ತನ್ನ ಶಿಶುವನ್ನು ಏನನ್ನು ಶಿಶುವಿನ ಯಾವ ಪ್ರಯತ್ನವನ್ನೂ ಬಯಸದೇ ತಾನೇ ತಾನಾಗಿ ಜಾಗದಿಂದ ಜಾಗಕ್ಕೆ ಒಯ್ಯುತ್ತದೆಯೋ ಹಾಗೆ ದೇವರು ತಾನೇ ತಾನಾಗಿ ಚೇತನಕ್ಕೆ ಕೃಪೆ ಮಾಡುತ್ತಾನೆ. ಭಗವಂತನ ಕೃಪೆಗಾಗಿ ಕಾದಿರುವುದಷ್ಟೇ ಮನುಷ್ಯನ ಕರ್ತವ್ಯ ಎನ್ನುವ ಭಾವವನ್ನು ತೆಂಗಲೆ ಸಂಪ್ರದಾಯದ ಮಾರ್ಜಾಲ ಕಿಶೋರನ್ಯಾಯ ಪ್ರತಿಪಾದಿಸುತ್ತದೆ.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ